Karnataka Agri-Business & Food Processing Policy 20152019-06-11T04:29:37+00:00

ಕರ್ನಾಟಕ ಕೃಷಿ-ವಾಣಿಜ್ಯ & ಸಂಸ್ಕರಣಾ ಕಾರ್ಯನೀತಿ 2015

ಕರ್ನಾಟಕವು ಕೃಷಿ ಪ್ರಧಾನ ಆರ್ಥಿಕತೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಒಟ್ಟಾರೆ ಅಭಿವೃದ್ಧಿಯು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಅಭಿವೃದ್ಧಿಯನ್ನು ಅವಲಂಬಿಸಿದೆ. ಕಳೆದ ದಶಕದಲ್ಲಿ, ರಾಜ್ಯದಲ್ಲಿ ಆಹಾರ ಉತ್ಪನ್ನಗಳ ಉತ್ಪಾದನೆ ಮತ್ತು ಗುಣಮಟ್ಟದಲ್ಲಿ ಗಮನಾರ್ಹವಾದ ಏರಿಕೆ ಕಂಡು ಬಂದಿದೆ. ಕೃಷಿ ಬೆಳೆ ಪದ್ಧತಿಗಳಲ್ಲಿಯೂ ಸಹ ಸಾಂಪ್ರದಾಯಿಕ ಆಹಾರ ಬೆಳೆಗಳಿಂದ ಹಣ್ಣುಗಳು, ತರಕಾರಿಗಳು, ಹೂವುಗಳು ಮತ್ತು ತೋಟದ ಬೆಳೆಗಳಂತಹ ಹೆಚ್ಚಿನ ಆದಾಯ ತಂದುಕೊಡುವ ಬೆಳೆಗಳನ್ನು ಬೆಳೆಯುವ ಬದಲಾವಣೆ ಕಂಡು ಬಂದಿದೆ. ಇದರಿಂದ ಆದಾಯ ಮಟ್ಟ, ಉದ್ಯೋಗ ಅವಕಾಶ ಮತ್ತು ಕೃಷಿ ಆಧಾರಿತ ಉದ್ಯಮಗಳ ಬೆಳವಣಿಗೆಗೆ ಅವಕಾಶಗಳು ಹೆಚ್ಚಾದರೂ, ಮೂಲಭೂತ ಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಗಮನಾರ್ಹವಾದ ಕೊರತೆಯನ್ನು ಗಮನಿಸಬಹುದಾಗಿದೆ. ಇದರಿಂದ ಉತ್ಪನ್ನಗಳ ಪೂರೈಕೆಯಲ್ಲಿ ಹೆಚ್ಚಳ ಅಥವಾ ಕೊರತೆ, ಬೆಲೆಗಳಲ್ಲಿ ಏರಿಳಿತ, ಬೆಳೆ ನಷ್ಟ ಮತ್ತು ಲಾಭದಾಯಕವಲ್ಲದ ಬೆಲೆ ಮುಂತಾದವುಗಳನ್ನು ಈಗಲೂ ಸಹ ಕಾಣಬಹುದಾಗಿದೆ.

ಕರ್ನಾಟಕ ಸರ್ಕಾರವು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ರಾಜ್ಯದ ಜಿ.ಡಿ.ಪಿ. ಬೆಳವಣಿಗೆಯ ವೇಗವನ್ನು ತ್ವರಿತಗೊಳಿಸುವ, ರೈತರ ಉತ್ಪನ್ನಗಳಿಗೆ ಹೆಚ್ಚಿನ ಆದಾಯ ತಂದುಕೊಡುವ ಹಾಗೂ ಆಹಾರ ಭದ್ರತೆಯನ್ನು ಖಚಿತಪಡಿಸುವ ಸಾಧನವೆಂಬುದಾಗಿ ಪರಿಗಣಿಸಿದೆ. ರಾಜ್ಯವು ವಿವಿಧ ಬಗೆಯ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸೂಕ್ತವಾದ ಸಮೃದ್ಧ ಜೈವಿಕ ವೈವಿಧ್ಯತೆಯನ್ನು ಹಾಗೂ ಹತ್ತು ಕೃಷಿ ಹವಾಮಾನ ವಲಯಗಳನ್ನು ಹೊಂದಿದೆ. ಇದಲ್ಲದೆ, ಮೀನುಗಾರಿಕೆ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡುವ ಸುದೀರ್ಘ ಕರಾವಳಿ ಸಹ ನಮ್ಮ ರಾಜ್ಯದಲ್ಲಿದೆ.

ಪ್ರಸ್ತುತ ರಾಜ್ಯದಲ್ಲಿ ಒಟ್ಟು ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳ ಅಂದಾಜು ಶೇಕಡ 3ರಷ್ಟು ಭಾಗವನ್ನು ಸಂಸ್ಕರಿಸಲಾಗುತ್ತಿದೆ. ಭಾರತ ಸರ್ಕಾರದ ಆಹಾರ ಸಂಸ್ಕರಣಾ ಉದ್ಯಮಗಳ ಮಂತ್ರಾಲಯವು 2025ರೊಳಗೆ ರಾಷ್ಟ್ರಮಟ್ಟದಲ್ಲಿ ಶೇಕಡ 25ರಷ್ಟು ಆಹಾರ ಸಂಸ್ಕರಣೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರಮಟ್ಟದಲ್ಲಿ ಅಳವಡಿಸಿಕೊಳ್ಳಲಾಗಿರುವ ಈ ಮಾನದಂಡದ ಅನುಸಾರ ರಾಜ್ಯದಲ್ಲಿ ಇಸವಿ 2020ರೊಳಗೆ ಶೇಕಡ 10ರಷ್ಟು ಹಾಗೂ ಇಸವಿ 2025ರೊಳಗೆ ಶೇಕಡ 25ರಷ್ಟು ಆಹಾರ ಉತ್ಪನ್ನಗಳ ಸಂಸ್ಕರಣೆ ಸಾಧನೆಯ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ನೀತಿಯ ಮೂಲಕ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ವಲಯವನ್ನು ಹೆಚ್ಚಿನ ಉದ್ಯೋಗವಕಾಶಗಳನ್ನು ಕಲ್ಪಿಸುವ ಹಾಗೂ ರೈತರ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಅವರಿಗೆ ಹೆಚ್ಚಿನ ಆದಾಯ ತಂದುಕೊಡುವ ಸ್ಪಂದನಶೀಲ ವಲಯವನ್ನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.

ನೀತಿ 2015